ಶ್ರೀಕಂಠೇಶಗೌಡ, ಎಂ ಎಲ್
	1852-1926. ಹೊಸಗನ್ನಡ ಆರಂಭಕಾಲದ ಹೆಸರಾಂತ ಲೇಖಕರು. ಹುಟ್ಟಿದ್ದು ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ದೇಶಹಳ್ಳಿಯಲ್ಲಿ. ಇವರ ಪೂರ್ವಿಕರು ಮೂಲತಃ ನಾಗಮಂಗಲದವರು. ಇವರ ತಾತ ಮತ್ತು ತಂದೆಯವರು ಸುಬೇದಾರರಾ ಗಿದ್ದವರು, ಜೊತೆಗೆ ಸಾಹಿತ್ಯಾಸಕ್ತರು. ಹೀಗಾಗಿ ಚಿಕ್ಕಂದಿನಲ್ಲಿಯೇ ಇವರಿಗೆ ಸಾಹಿತ್ಯದಲ್ಲಿ ಅಭಿರುಚಿ ಮೂಡಿತು, ಕುಣಿಗಲ್‍ನಲ್ಲಿ ಆರಂಭದ ವ್ಯಾಸಂಗವನ್ನು ಮುಗಿಸಿದ ಇವರು ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಓದಿ ಬಿ.ಎ. ಪದವಿ ಪಡೆದರು. ಅನಂತರ ಮದರಾಸು ವಿಶ್ವವಿದ್ಯಾಲಯ ದಿಂದ ಬಿ.ಎಲ್. ಪದವಿಯನ್ನು ಪಡೆದ ಇವರು ಬೆಂಗಳೂರಿನಲ್ಲಿ ಪ್ರಸಿದ್ಧ ವಕೀಲರೊಬ್ಬರ ಬಳಿ ಸ್ವಲ್ಪಕಾಲ ಕೆಲಸ ಮಾಡಿ ಮೈಸೂರಿನಲ್ಲಿ ಸ್ವತಂತ್ರವಾಗಿ ತಮ್ಮ ವಕೀಲವೃತ್ತಿಯನ್ನು ಆರಂಭಿಸಿದರು (ಸು. 1885). ವಕೀಲರಾಗಿ ಒಳ್ಳೆಯ ಹೆಸರುಗಳಿಸಿದ ಇವರನ್ನು ಸರ್ಕಾರ ನ್ಯಾಯಾಧೀಶ ರನ್ನಾಗಿ ನೇಮಿಸಿತು. ಹಾಸನ, ಶಿವಮೊಗ್ಗ, ಕೋಲಾರ, ಮಧುಗಿರಿ ಮತ್ತು ನಂಜನಗೂಡುಗಳಲ್ಲಿ ನ್ಯಾಯಾಧೀಶರಾಗಿ ಕೆಲಸ ಮಾಡಿದ ಇವರು 1910ರಲ್ಲಿ ನಿವೃತ್ತರಾದರು.

	ಕನ್ನಡ ಪ್ರೇಮಿಗಳಾಗಿದ್ದ ಶ್ರೀಕಂಠೇಶಗೌಡರಿಗೆ ಇಂಗ್ಲಿಷ್ ಭಾಷೆಯಲ್ಲೂ ಒಳ್ಳೆಯ ಪರಿಶ್ರಮವಿತ್ತು. ಚಿಕ್ಕಂದಿನಲ್ಲಿಯೇ ಇವರಿಗೆ ಭಾರತ-ರಾಮಾಯಣಗಳ ಪರಿಚಯವಾಗಿತ್ತು. ನಾಟಕದಲ್ಲೂ ಇವರಿಗೆ ಆಸಕ್ತಿ ಇತ್ತು. ಇವರು ನಡೆಸಿದ ಸಾಹಿತ್ಯ ಚಟುವಟಿಕೆ ವ್ಯಾಪಕವಾದುದು, ವೈವಿಧ್ಯಮಯವಾದುದು. ಮೈಸೂರಿನಲ್ಲಿ ವಕೀಲರಾಗಿದ್ದಾಗ ತಮ್ಮ ಹಲವು ಗೆಳೆಯರೊಂದಿಗೆ ಕೂಡಿಕೊಂಡು ಗ್ರಾಜುಯೇಟ್ಸ್ ಟ್ರೇಡಿಂಗ್ ಅಸೋಸಿಯೇಷನ್ ಎಂಬ ಸಂಸ್ಥೆಯನ್ನು ಆರಂಭಿಸಿ, ಸುಮಾರು ಒಂದುನೂರು ಪುಸ್ತಕಗಳನ್ನು ಆ ಸಂಸ್ಥೆಯ ವತಿಯಿಂದ ಪ್ರಕಟಿಸಿ, ಅನೇಕ ಹೊಸ ಲೇಖಕರನ್ನು ಬೆಳಕಿಗೆ ತಂದರು. ಸಂಸ್ಥೆಯ ಆಶ್ರಯದಲ್ಲಿ ವಿದ್ಯಾದಾಯಿನಿ ಎಂಬ ಪತ್ರಿಕೆಯನ್ನು ಆರಂಭಿಸಿ ಸ್ವಲ್ಪಕಾಲ ನಡೆಸಿದರು. ಅನಂತರ ಸುರಭಿ ಎಂಬ ಪತ್ರಿಕೆಯನ್ನು, ಶ್ರೀಕಂಠೇಶ್ವರ ನಾಟಕ ಸಭಾ ಎಂಬ ಒಂದು ನಾಟಕ ಕಂಪನಿಯನ್ನು ಆರಂಭಿಸಿ ಕೆಲಕಾಲ ನಡೆಸಿದರು.

	ಇವರು ನಾಟಕ, ಕಾದಂಬರಿ, ಕಾವ್ಯ, ಜೀವನಚರಿತ್ರೆ ಮುಂತಾದ ನಾನಾ ಪ್ರಕಾರಗಳಲ್ಲಿ ಕೃತಿಗಳನ್ನು ಪ್ರಕಟಿಸಿದ್ದಾರೆ. ಭಾಷಾಂತರ ಕ್ಷೇತ್ರದಲ್ಲಿ ಇವರು ಮಾಡಿರುವ ಕೆಲಸ ದೊಡ್ಡ ಮಟ್ಟದ್ದು. ಕನ್ನಡದಲ್ಲಿ ಆಸಕ್ತಿ ಅಭಿರುಚಿಗಳು ಇನ್ನೂ ಕುದುರದಿದ್ದಂಥ ದಿನಗಳಲ್ಲಿ ಇವರು ಷೇಕ್ಸ್‍ಪಿಯರ್‍ನ ಒಥೆಲೋ, ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ಸ್ , ರೋಮಿಯೋ ಜೂಲಿಯಟ್ ಎಂಬ ನಾಟಕಗಳನ್ನು ಕ್ರಮವಾಗಿ ಪ್ರತಾಪ ರುದ್ರದೇವ, ಪ್ರಮೀಳಾರ್ಜು ನೀಯಂ, ರಾಮವರ್ಮ-ಲೀಲಾವತಿ ಎಂಬ ಹೆಸರಿನಲ್ಲಿ ಕನ್ನಡಕ್ಕೆ ರೂಪಾಂತರಿಸಿ ಪ್ರಕಟಿಸಿದ್ದಾರೆ. ಈ ಎಲ್ಲ ನಾಟಕಗಳನ್ನು ಪ್ರಾದೇಶಿಕ ಹಿನ್ನೆಲೆಯಲ್ಲಿ ರೂಪಾಂತರಿಸಿ ರುವುದು ಒಂದು ವಿಶೇಷ. ಇವರ ಕೆಲವು ನಾಟಕಗಳು ವರದಾಚಾರ್ಯರ ರತ್ನಾವಳಿ ನಾಟಕ ಕಂಪನಿಯಲ್ಲಿ ಅಭಿನಯಗೊಂಡು ಜನಪ್ರಿಯವಾದುವು. ಸೀತಾದೇವಿಯ ಸ್ವಯಂವರ ಸಂದರ್ಭವನ್ನು ಕುರಿತು ಸೀತಾಸ್ವಯಂವರ ಮತ್ತು ಪಾಂಡವರ ವನವಾಸ ಸಂದರ್ಭ ಕುರಿತು ಘೋಷಯಾತ್ರೆ ಎಂಬ ಎರಡು ಸ್ವತಂತ್ರ ನಾಟಕಗಳನ್ನು ಇವರು ಬರೆದಿದ್ದಾರೆ. ಕನ್ನಡದಲ್ಲಿ ಸ್ವತಂತ್ರ ನಾಟಕಗಳಿಗೆ ಅಭಾವವಿದ್ದ ಕಾಲದಲ್ಲಿ ಇವರ ಈ ಪ್ರಯತ್ನ ಐತಿಹಾಸಿಕ ಮಹತ್ತ್ವದ್ದಾಗಿದೆ. ಭವಾನಿಬಾಳು ಎಂಬ ಒಂದು ಚಾರಿತ್ರಿಕ ಕಾದಂಬರಿಯನ್ನೂ ಚಾಮನೃಪ ಚಂದ್ರಪ್ರಭೆ ಎಂಬ ಒಂದು ಕಾವ್ಯವನ್ನೂ ಇವರು ರಚಿಸಿದ್ದಾರೆ. ತಾವು ಪ್ರಕಟಿಸುತ್ತಿದ್ದ ವಿದ್ಯಾದಾಯಿನಿ ಮತ್ತು ಸುರಭಿ ಪತ್ರಿಕೆಗಳಲ್ಲಿ ಅನೇಕ ವಿಡಂಬನ ಕವನಗಳನ್ನು, ಜನಪದಗೀತೆ ಹಾಗೂ ಕಥೆಗಳನ್ನು, ಜೀವನಚಿತ್ರಗಳನ್ನು ಬರೆದಿದ್ದಾರೆ.

	ಕನ್ನಡನಾಡಿನಲ್ಲಿ ಕನ್ನಡಕ್ಕೆ ಮೊದಲ ಮಣೆ ಎಂದು ನಂಬಿದ್ದ ಶ್ರೀಕಂಠೇಶಗೌಡರು ತಾವು ವಕೀಲರಾಗಿದ್ದಾಗ ಮತ್ತು ನ್ಯಾಯಾಧೀಶರಾಗಿ ದ್ದಾಗ ಅನೇಕ ಸಂದರ್ಭಗಳಲ್ಲಿ ಕನ್ನಡದಲ್ಲಿ ಮೊಕದ್ದಮೆಗಳನ್ನು ನಡೆಸಿದರು, ತೀರ್ಪುಗಳನ್ನು ನೀಡಿದರು. ಶಾಲಾ ಮಕ್ಕಳಿಗಾಗಿ ಶಾರದಾ ಭೂಗೋಳ, ದಕ್ಷಿಣ ಭಾರತದ ವ್ಯವಸಾಯ ಪದ್ಧತಿ ಎಂಬ ಎರಡು ಪಠ್ಯಪುಸ್ತಕಗಳನ್ನು ಕನ್ನಡದಲ್ಲಿ ಬರೆದರು. ಪ್ರಾಮಾಣಿಕರೂ ದಕ್ಷ ಅಧಿಕಾರಿಗಳೂ ಆಗಿದ್ದ ಇವರು ತಮ್ಮ ಜಿವನದುದ್ದಕ್ಕೂ ಕನ್ನಡದ ಅಭಿವೃದ್ಧಿಗಾಗಿ, ಹಿಂದುಳಿದ ವರ್ಗಗಳ ಮುನ್ನಡೆಗಾಗಿ ಶ್ರಮಿಸಿದರು.	ಇವರು 1926 ನವೆಂಬರ್ 26ರಂದು ನಿಧನರಾದರು. ಇವರ ಕೃತಿಗಳನ್ನು ಸಂಗ್ರಹಿಸಿ ಶ್ರೀಕಂಠೇಶಗೌಡರ ಕೃತಿಗಳು ಎಂಬ ಸಂಪುಟವನ್ನು 1973ರಲ್ಲಿ ಪ್ರಕಟಿಸಲಾಯಿತು.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

		(ಎಮ್.ಆರ್.)